ನರಹರಿತೀರ್ಥ
ಮಧ್ವಾಚಾರ್ಯರ ಶಿಷ್ಯರು. ಶ್ರೀಮಧ್ವಂ ಪದ್ಮನಾಭಂ ನರಹರಿಮುನಿಪಂ ಮಾಧವಾಕ್ಷೋಭ್ಯತೀರ್ಥಂ ಎಂಬ ಗುರುಪರಂಪರೆಯ ಶ್ಲೋಕದಲ್ಲಿ ಬಂದಿರುವಂತೆ ಮಧ್ವಾಚಾರ್ಯರ ತರುವಾಯದಲ್ಲಿ ಪದ್ಮನಾಭತೀರ್ಥ, ನರಹರೀತೀರ್ಥ, ಮಾಧವತೀರ್ಥ ಮತ್ತು ಅಕ್ಷೋಭ್ಯತೀರ್ಥರು ಅನುಕ್ರಮವಾಗಿ ದ್ವೈತವೇದಾಂತ ಸಾಮ್ರಾಜ್ಯದಲ್ಲಿ ಅಭಿಷಿಕ್ತರಾಗಿದ್ದರೆಂದು ಹೇಳಿದೆ. ಕ್ರಿ.ಶ. 1336ರಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ವಿದ್ಯಾರಣ್ಯರ ಸಮಕಾಲೀನರಾದ ಜಯತೀರ್ಥರು ಅಕ್ಷೋಭ್ಯತೀರ್ಥರ ಸಾಕ್ಷಾತ್ ಶಿಷ್ಯರು. ಅಕ್ಷೋಭ್ಯತೀರ್ಥರು ವಿದ್ಯಾರಣ್ಯರ ಸಮಕಾಲಿಕರೆಂದು ರಾಮಾನುಜೀಯ ಗುರುಪರಂಪರಾಗತ ಶ್ಲೋಕದಿಂದ ಗೊತ್ತಾಗುತ್ತದೆ. ಸಮಕಾಲಿಕ ಆಧಾರಗಳಿಂದಲೂ ಕಲಿಂಗ ದೇಶದಲ್ಲಿ ದೊರೆತ ನರಹರಿತೀರ್ಥರ ಶಾಸನಗಳಿಂದಲೂ ಇವರು 1250-1335ರ ಅವಧಿಯಲ್ಲಿ ಬಾಳಿದರೆಂದು ಹೇಳಬಹುದು.

ಇವರು ಕಲಿಂಗ ರಾಜ್ಯದಲ್ಲಿ ಪ್ರತಿಷ್ಠಿತ ಸ್ಥಾನ ಪಂಡಿತರೂ ರಾಜಗುರುಗಳೂ ಆಗಿದ್ದರು. ಆ ದೇಶದಲ್ಲಿ ಅರಾಜಕತೆ ಉಂಟಾದಾಗ ಮಂತ್ರಿಗಳೂ ಪ್ರಜೆಗಳೂ ಇವರನ್ನು ರಾಜ್ಯಭಾರ ವಹಿಸಿಕೊಂಡು ದೇಶದ ಭದ್ರತೆಯನ್ನು ಕಾಪಾಡಬೇಕೆಂದು ವಿಜ್ಞಾಪಿಸಿದರೆಂದೂ ಆಗ ಇವರು ಜನರ ಪ್ರಾರ್ಥನೆಯನ್ನು ಮನ್ನಿಸಿ ಆಡಳಿತವನ್ನು ವಹಿಸಿಕೊಂಡರೆಂದು ನರಹರಿತೀರ್ಥವಿಜಯದಲ್ಲಿ ಹೇಳಿದೆ. ಕಾಕುಳ ಜಿಲ್ಲೆಯ ಕೂರ್ಮದಲ್ಲಿಯೂ ವಿಶಾಖಪಟ್ಟಣ ಜಿಲ್ಲೆಯ ಸಿಂಹಾಚಲದಲ್ಲಿಯೂ ಇವರು ಕೂರ್ಮ ದೇವಸ್ಥಾನ ಹಾಗೂ ನರಸಿಂಹ ದೇವಸ್ಥಾನಗಳಿಗೂ ದಾನ ನೀಡಿದ ಶಾಸನಗಳು ಸಿಕ್ಕಿವೆ. ಇವುಗಳ ಕಾಲ 1186ರಿಂದ 1205ರ ಅವಧಿ ಎನ್ನಲಾಗಿದೆ. 1203ರ ಕೂರ್ಮ ಶಾಸನದಲ್ಲಿ ಆನಂದತೀರ್ಥರ ಶಿಷ್ಯರಾದ ನರಹರಿತೀರ್ಥರು ಗುರುಗಳ ಆಜ್ಞೆಯಿಂದ ಕೈಯಲ್ಲಿ ಕತ್ತಿ ಹಿಡಿದು ಯುದ್ಧಮಾಡಿ ಶಬರಸೈನ್ಯವನ್ನು ಚದರಿಸಿ ದೇಶವನ್ನು ಶತ್ರುಗಳ ಆಕ್ರಮಣದಿಂದ ರಕ್ಷಿಸಿದರೆಂದು ಹೇಳಿದೆ. 1205ರ ಒಂದು ಶಾಸನದಲ್ಲಿ ನರಹರಿತೀರ್ಥ ಮತ್ತು ಕಲಿಂಗರಾಜ ವೀರನರಸಿಂಹದೇವ ಇವರುಗಳ ಉಲ್ಲೇಖವಿದೆ. ಇದರಲ್ಲಿ ವೀರನರಸಿಂಹದೇವನ ಆಳ್ವಿಕೆಯ 18ನೆಯ ವರ್ಷದಲ್ಲಿ ದತ್ತಿ ಕೊಡಲ್ಪಟ್ಟಿತೆಂದು ಬರೆದಿದೆ. ಇವರು ತಮ್ಮ ಗುರುಗಳಾದ ಆನಂದತೀರ್ಥರಿಂದ ವಾದದಲ್ಲಿ ಸೋತ ಮೇಲೆ ಅವರ ಶಿಷ್ಯರಾಗಿ ಸಂನ್ಯಾಸಾಶ್ರಮವನ್ನು ಸ್ವೀಕರಿಸಿ ನರಹರಿತೀರ್ಥ ಎಂಬ ಹೆಸರಿನಿಂದ ಯತಿಗಳಾಗಿ ಕಲಿಂಗ ರಾಜ್ಯವನ್ನು ಆಳಿದರೆಂದು ತಿಳಿಯಬಹುದು. ಇವರು ರಾಜ್ಯ ಸೂತ್ರಗಳನ್ನು ವಹಿಸಿದಾಗ ವೀರನರಸಿಂಹ ತೀರ ದುರ್ಬಲನಾಗಿರಬೇಕು. ಆಗ ಉಂಟಾಗಿದ್ದ ಶಬರರ ಉಪಟಳದಿಂದ ದೇಶವನ್ನು ರಕ್ಷಿಸಲಿಕ್ಕೆ ಪ್ರಜೆಗಳ ಪ್ರಾರ್ಥನೆಯ ಮೇಲೆ ಆಸ್ಥಾನದಲ್ಲಿ ಪ್ರಸಿದ್ಧ ಮಂತ್ರಿಗಳೂ ಪಂಡಿತರೂ ಆಗಿದ್ದ ನರಹರಿತೀರ್ಥರು ಟೊಂಕಕಟ್ಟಿ ನಿಂತು ತಮ್ಮ ಕಾರ್ಯವನ್ನು ನೆರವೇರಿಸಿರಬೇಕು. ಇವರ ಪೂರ್ವಾಶ್ರಮದ ಹೆಸರು ಶಾಮಾಶಾಸ್ತ್ರಿಗಳೆಂದೂ ತಮ್ಮ ಗುರುಗಳ ಆಜ್ಞಾನುಸಾರವಾಗಿ ಕಲಿಂಗರಾಜನ ಬೊಕ್ಕಸದಿಂದ ಸೀತಾರಾಮರ ಧಾತುಮಯ ವಿಗ್ರಹಗಳನ್ನು ತಂದು ಗುರುಗಳಿಗೆ ಒಪ್ಪಿಸಿದರೆಂದೂ ಅವರು 80 ದಿನ ಅವನ್ನು ಪೂಜಿಸಿ ಪದ್ಮನಾಭತೀರ್ಥರಿಗೆ ಸಂಸ್ಥಾನವನ್ನು ಒಪ್ಪಿಸಿ ಅದೃಶ್ಯರಾಗಿ ಬದರಿಕಾಶ್ರಮಕ್ಕೆ ಹೋದರೆಂದೂ ನರಹರಿತೀರ್ಥ ವಿಜಯದಿಂದಲೂ ಪರಂಪರಾಗತ ಕಡತಗಳಿಂದಲೂ ತಿಳಿಯುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಇವರು ತಮ್ಮ ಗುರುಗಳ ಗ್ರಂಥಗಳ ಮೇಲೆ ಟೀಕೆ ಟಿಪ್ಪಣಿಗಳನ್ನು ಬರೆದಿರುವುದಲ್ಲದೆ ಭಗವದ್ಗೀತೆಯ ಮೇಲೆ ಸ್ವತಂತ್ರವಾದ ಟೀಕೆಯೊಂದನ್ನು ಬರೆದಿದ್ದಾರೆ. ಕರ್ಮ ನಿರ್ಣಯ, ತತ್ತ್ವೋದ್ಯೋತ, ಖಂಡನ ತ್ರಯಗಳ ಮೇಲೆ ಇವರ ಗ್ರಂಥಗಳು ಇದ್ದಿರಬೇಕೆಂದು ಗ್ರಂಥಾಂತರದಲ್ಲಿ ಬರುವ ಉಲ್ಲೇಖಗಳಿಂದ ತಿಳಿಯಬಹುದು.

ಒಟ್ಟಿನಲ್ಲಿ ಇವರು ಶೂರ ಧೀರ ರಾಜ್ಯತಂತ್ರಪಟುಗಳಾಗಿದ್ದರಲ್ಲದೆ ನಿಸ್ಸೀಮ ಗುರುಭಕ್ತರೂ ಮಹಾಪಂಡಿತರೂ ಆಗಿದ್ದರೂ ಇವರು ಕರ್ನಾಟಕ ಹರಿದಾಸ ಕೂಟದ ಆದ್ಯಪ್ರವರ್ತಕರೆಂದು ಪ್ರಸಿದ್ಧರಾಗಿದ್ದಾರೆ. ಇವರ ಅಂಕಿತ ರಘುಪತಿ ಎಂದಿದೆ. ಇದರ ಜೊತೆಗೆ ನೃಹರಿ ನರಹರಿ ಎಂಬ ತಮ್ಮ ಹೆಸರನ್ನು ಶ್ಲಿಷ್ಟವಾಗಿ ಉಪಯೋಗಿಸಿದ್ದಾರೆ. ಇವರ ಹಾಡುಗಳು ಕೆಲವೇ ಸಿಕ್ಕಿವೆ. 
(ಆರ್.ಎಸ್.ಪಿ.)